ಸೂರತ್
	ಭಾರತದ ವಾಯವ್ಯದಲ್ಲಿರುವ ಗುಜರಾತ್ ರಾಜ್ಯದ ಒಂದು ಜಿಲ್ಲೆ ಮತ್ತು ಜಿಲ್ಲಾಡಳಿತ ಕೇಂದ್ರ ನಗರ. ತಪತಿ ನದಿಯ ಮುಖಭಾಗದ ಬಲದಂಡೆಯಲ್ಲಿರುವ ಗುಜರಾತ್ ರಾಜ್ಯದ ಎರಡನೆಯ ಮಹಾನಗರ. ಮುಂಬಯಿ ನಗರದ ಉತ್ತರಕ್ಕೆ 240 ಕಿಮೀ ದೂರದಲ್ಲಿದೆ. ಜಿಲ್ಲಾ ವಿಸ್ತೀರ್ಣ 7657 ಚ.ಕಿಮೀ. ಜನಸಂಖ್ಯೆ 49,96,391.

	ಸೂರತ್ ಒಂದು ಬಂದರುನಗರ. ಈ ನಗರದಲ್ಲಿ ಹಿಂದಿನ ಅಂಕುಡೊಂಕಾದ ರಸ್ತೆಗಳೂ ಒತ್ತೊತ್ತಾಗಿ ಕಟ್ಟಿದ ಮನೆಗಳೂ ಇವೆ. ಇಲ್ಲಿ ಕೆಲವು ಐತಿಹಾಸಿಕ ಕಟ್ಟಡಗಳಾದ ನವ್ ಸೈಯದ್ ಸಾಹೇಬ್ ಮಸೀದಿ ಮತ್ತು ಒಂಬತ್ತು ಗೋರಿ, 1540ರಲ್ಲಿ ಖುದವಾದ್ ಖಾನ್‍ನಿಂದ ನಿರ್ಮಿಸಲ್ಪಟ್ಟ ಮಸೀದಿ ಮತ್ತು ಅವನ ಗೋರಿ, 1546ರಲ್ಲಿ ನಿರ್ಮಿಸಿದ ಅರಮನೆ, 1639ರಲ್ಲಿ ನಿರ್ಮಿಸಿದ ಇಂದ್ರೂಸ್ ಮಸೀದಿ ಮತ್ತು ಗೋಸಾವಿ ದೇವಸ್ಥಾನಗಳಿವೆ.

	ಸೂರತ್ ನಗರ ಸ್ಥಾಪನೆ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಗೋಪಿಕೆರೆಯನ್ನು ನಿರ್ಮಿಸಿದ ಗೋಪಿ ಎಂಬ ಬ್ರಾಹ್ಮಣ 1516ರಲ್ಲಿ ಇದನ್ನು ಸೂರಜ್‍ಪುರ್ ಅಥವಾ ಸೂರ್ಯಪುರ್ ಎಂದು ಇಂದಿನ ಸೂರತ್ ನಗರ ಪ್ರದೇಶವನ್ನು ಹೆಸರಿಸಿದನೆಂದು ಹೇಳುವರು. 1520ರ ವೇಳೆಗೆ ಇದನ್ನು ಸೂರತ್ ಎಂದು ಕರೆಯಲಾಯಿತು. ಕೆಲವು ದಾಖಲೆಗಳ ಪ್ರಕಾರ ಈ ನಗರ ಇನ್ನೂ ಹಿಂದಿನಿಂದಲೇ ಇತ್ತೆಂದು ತಿಳಿದುಬರುತ್ತದೆ.

	ಸೂರತ್ ಪ್ರದೇಶವನ್ನು 1194ರಲ್ಲಿ ಮಹಮ್ಮದ್ ಘೋರಿಯ ಸೇನಾಪತಿ ಕುತ್ಬುದ್ದೀನ್ ಐಬಕ್ ಆಕ್ರಮಣ ಮಾಡಿದ. 1347ರಲ್ಲಿ ದೆಹಲಿ ಸುಲ್ತಾನ ಮಹಮ್ಮದ್ ತೊಗಲಕ್ ಈ ನಗರವನ್ನು ಸುಲಿಗೆ ಮಾಡಿದ. ಆತನ ಉತ್ತಾರಾಧಿಕಾರಿ ಫಿರೋಜ್ó ಷಾ ತೊಗಲಕ್ 1373ರಲ್ಲಿ ಇಲ್ಲಿ ಬಂದು ಕೋಟೆ ಕಟ್ಟಿಸಿದ. 1514ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಯೊಬ್ಬ ಸೂರತ್ ನಗರವನ್ನು ಒಂದು ಪ್ರಮುಖ ಬಂದರೆಂದು ವರ್ಣಿಸಿದ್ದಾನೆ. ಪೋರ್ಚುಗೀಸರು 1512 ಮತ್ತು 1530ರಲ್ಲಿ ಈ ನಗರವನ್ನು ಸುಟ್ಟು ಹಾಕಿದರು. 1546ರಲ್ಲಿ ಮೊಗಲ್ ಸುಲ್ತಾನರು ಅರಮನೆ ಮತ್ತು ನಗರ ಭಾಗವನ್ನು ಮತ್ತೆ ನಿರ್ಮಿಸಿದರು. ಮೊಗಲ್ ಸಾಮ್ರಾಜ್ಯದ ದೊರೆಯಾದ ಅಕ್ಬರ್ 1573ರಲ್ಲಿ ಸೂರತ್ ನಗರವನ್ನು ಆಕ್ರಮಿಸಿಕೊಂಡ. ಅನಂತರ 100 ವರ್ಷಗಳ ಕಾಲ ಇಲ್ಲಿ ಶಾಂತಿ ನೆಲಸಿತ್ತು. 1612ರಲ್ಲಿ ಬ್ರಿಟಿಷರು ಇಲ್ಲಿ ಒಂದು ಕಾರ್ಖಾನೆ ಸ್ಥಾಪಿಸಿದರು. 1616ರಲ್ಲಿ ಡಚ್ಚರು ಈ ನಗರವನ್ನಾಕ್ರಮಿಸಿಕೊಂಡರು. ಇದೇ ವರ್ಷದಲ್ಲಿ ಮರಾಠ ಸಾಮ್ರಾಟ ಶಿವಾಜಿ ಈ ನಗರದ ಮೇಲೆ ದಾಳಿ ನಡೆಸಿದ. 1800ರಲ್ಲಿ ಬ್ರಿಟಿಷರು ಸಂಪೂರ್ಣವಾಗಿ ನಗರವನ್ನು ವಶಪಡಿಸಿಕೊಂಡರು. ಇಲ್ಲಿ ತಯಾರಿಸಿದ ರೇಷ್ಮೆ, ರೇಷ್ಮೆಬಟ್ಟೆ, ಜರತಾರಿ ಕಸೂತಿ ಮಾಡಿದ ರೇಷ್ಮೆವಸ್ತ್ರ ಮಸ್ಲಿನ್, ಕೆತ್ತನೆ ವಸ್ತುಗಳನ್ನು ಮೆಕ್ಕ, ಯಮೆನ್, ಬಾಸ್ರ(ಇರಾಕ್) ಮತ್ತು ಸುಮಾತ್ರಗಳಲ್ಲಿ (ಇಂಡೊನೇಷ್ಯ) ಮುಂತಾದ ದೇಶಗಳಿಗೆ ಕಳುಹಿಸಲಾಗುತ್ತಿತ್ತು.

ಸೂರತ್ ನಗರದ ಮುಖ್ಯ ಕೈಗಾರಿಕೆಗಳಿವು: ರೇಷ್ಮೆ ಮತ್ತು ಹತ್ತಿ ಜವಳಿ, ಹಡಗು ನಿರ್ಮಾಣ, ಜರಿ ಕೆಲಸ, ಕಸೂತಿ, ದಂತಕೆತ್ತನೆ, ಗಂಧ ಕೆತ್ತನೆ ಇತ್ಯಾದಿ 19ನೆಯ ಶತಮಾನದಲ್ಲಿ ಕಣ್ಮರೆಯಾಗಿದ್ದ ಅತ್ಯುತ್ತಮ ದರ್ಜೆ ಮಸ್ಲಿನ್ ಜವಳಿಯನ್ನು ಮತ್ತೆ 1950ರಲ್ಲಿ ಉತ್ಪಾದಿಸಲು ಆರಂಭಿಸಲಾಯಿತು. ಪಾರ್ಸಿ ಸಮುದಾಯದವರು ಎಲ್ಲರಿಗಿಂತ ಮೊದಲು ಇಲ್ಲಿಗೆ ಬಂದು ನೆಲಸಿದರಂತೆ. ಮುಂದೆ ಹಿಂದೂ, ಮುಸ್ಲಿಮ್, ಜೈನರು ಬಂದರು. ಇವರೆಲ್ಲರ ದೇವಸ್ಥಾನ, ಮಸೀದಿ, ಜೈನಾಲಯಗಳು ಇಲ್ಲಿವೆ. ಸಿಲ್ಕ್ ಮತ್ತು ಹತ್ತಿ ಬಟ್ಟೆಗಳ ಹಾಗೂ ಹೆಂಗಸರ ಅಚ್ಚು ಮೆಚ್ಚಿನ ನಾನಾ ಬಗೆಯ ಕೈಬಳೆಗಳ ತಯಾರಿಕೆಗೆ ಸೂರತ್ ಇಂದಿಗೂ ಪ್ರಸಿದ್ಧ. ಸೂರತ್ ಹಿಂದೆ ರಾಜ್ಯದ ಒಂದು ಪ್ರಮುಖ ಬಂದರಾಗಿತ್ತು. ಆದರೆ ಇತ್ತೀಚೆಗೆ ಸಮುದ್ರ ದಂಡೆಯಲ್ಲಿ ಮರಳಿನ ಅಧಿಕ ಶೇಖರಣೆಯಿಂದಾಗಿ ಮತ್ತು ಮುಂಬಯಿ ಬಂದರನ್ನು ಹೆಚ್ಚು ಉಪಯೋಗಕ್ಕೆ ಬಳಸಿಕೊಳ್ಳುವ ಅವಕಾಶವುಂಟಾದ್ದರಿಂದ ಇದರ ಪ್ರಾಮುಖ್ಯ ಕಡಿಮೆಯಾಯಿತು. ಹತ್ತಿ, ಹತ್ತಿಬಟ್ಟೆ ಮತ್ತು ಮರದ ದಿಮ್ಮಿಯನ್ನು ಈ ಬಂದರಿನಿಂದ ಸಾಗಿಸಲಾಗುತ್ತಿದೆ.				
	(ವಿ.ಆರ್.; ಸಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ